ಕಿನ್ನರ ಕಥೆ

ಜನಪದ ಕಥೆಗಳಲ್ಲಿಯೇ ಅತ್ಯಂತ ಪ್ರಸಾರವಿರುವ, ಹೆಚ್ಚು ಸಂಖ್ಯೆಯಲ್ಲಿ ದೊರೆಯುವ, ಸುಲಭವಾಗಿ ಪ್ರಯಾಣ ಮಾಡಬಹುದಾದ ಪ್ರಕಾರವೆಂದರೆ ಕಿನ್ನರ ಕಥೆ (ಫೇರಿ ಟೇಲ್). ಅಲೆಗ್ಸಾಂಡರ್ ಕ್ರಾಪ್ಟೆಯವರು ಹೇಳುವ ಹಾಗೆ, ಇದು ಅವಿಚ್ಫಿನ್ನ ಕಥನವುಳ್ಳ, ತಕ್ಕಮಟ್ಟಿಗೆ ದೀರ್ಘತೆಯಿರುವ, ಹಾಸ್ಯವನ್ನು ಬಿಟ್ಟಿರದಿದ್ದರೂ ಒಟ್ಟಾರೆ ಗಂಭೀರವಾದ ಗದ್ಯಕೃತಿಯಾಗಿದೆ: ಇದರ ಕೇಂದ್ರ ಪಾತ್ರದಲ್ಲಿ ಒಬ್ಬ ನಾಯಕ ಅಥವಾ ನಾಯಿಕೆ ಇದ್ದು, ಅವರು ಆರಂಭದಲ್ಲಿ ನಿರ್ಗತಿಕರಾಗಿ ಚಿತ್ರಿತರಾಗಿರುತ್ತಾರೆ; ಅತಿಮಾನುಷ ಅಂಶಕ್ಕೆ ಪಾಧಾನ್ಯವಿದ್ದು. ಸಾಹಸ ಪರಂಪರೆಗಳನ್ನು ಎಸಗಿದ ಮೇಲೆ ಅವರು ತಮ್ಮ ಗುರಿಯನ್ನು ಮುಟ್ಟುವರಲ್ಲದೆ, ಮುಗಿಯದೆ ಸುಖಕ್ಕೆ ಭಾಜನರಾಗುತ್ತಾರೆ. ಒಂದಾನೊಂದು ಊರಿನಲ್ಲಿ ಒಬ್ಬಾನೊಬ್ಬ ರಾಜ-ಎಂದು ಪ್ರಾರಂಭವಾಗುವ ಕಿನ್ನರ ಕಥೆ ನಾಯಕ ನಾಯಿಕೆಯರ ವಿವಾಹದಲ್ಲಿ ಮುಕ್ತಾಯಗೊಳ್ಳುತ್ತದೆ.

 ಇದು ಅಸಂಖ್ಯಾತ ಆಶಯಗಳಿಂದ ರೂಪಿತವಾಗಿರುತ್ತದೆ: ಅಲ್ಲದೆ ಆಶಯದ ಮೂಲಕವೇ ಕಥೆ ಬೆಳೆಯುತ್ತ ಹೋಗುತ್ತದೆ. ಇಂಥ ಹಲವಾರು ಆಶಯಗಳು ಪ್ರತಿ ಕಥಾವರ್ಗದಲ್ಲೂ (ಟೈಪ್) ಇರುತ್ತವೆ. ಪ್ರಪಂಚಾದ್ಯಂತ ವಿತರಣೆಯಲ್ಲಿರುವ ಕಿನ್ನರ ಕಥೆಗಳ ಅಸಂಖ್ಯಾತ ರೂಪಾಂತರಗಳು ಜಗತ್ತಿನಲ್ಲೆಲ್ಲ ದೊರೆಯುತ್ತವೆ. ಇವುಗಳೆಲ್ಲದರ ಅಧ್ಯಯನದಿಂದ ಇದೊಂದು ಪ್ರಾಚೀನ ಜಗತ್ತಿನ ಉಳಿಕೆ ಎಂದು ವಿದ್ವಾಂಸರು ತೀರ್ಮಾನ ಮಾಡಿದ್ದಾರೆ.

ಕಿನ್ನರ ಕಥೆ ಹರ್ಷಾಂತವಾದ, ಭಾವರಸಾತಿರೇಕವುಳ್ಳ, ಪ್ರಾಯಿಕವಾಗಿ ಸದ್ಗುಣಕ್ಕೆ ಜಯವನ್ನು ತೋರಿಸುವ ಕಥೆಯಾಗಿದೆ. ಇದಕ್ಕೆ ಸಾರ್ವತ್ರಿಕವಾದ ಕೆಲವು ಲಕ್ಷಣಗಳಿವೆ. ಅವುಗಳನ್ನೀಗ ಪರಿಶೀಲಿಸಬಹುದು. ಮೊದಲಿಗೆ ಪಾತ್ರಗಳಿಗೆ ಸಂಬಂಧಿಸಿದಂತೆ ಕೆಲವು ವಿಷಯಗಳನ್ನು ನೋಡಬಹುದು. ಕಿನ್ನರ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳು ಬಹಳ ಕಡಿಮೆ. ಅವನ್ನು ಒಟ್ಟಾರೆ ನಾಯಕ ಅಥವಾ ನಾಯಿಕೆ, ಕರುಣಾಳು ಸಹಾಯಕರು. ಮತ್ತು ಖಳನಾಯಕರೆಂದು ಮೂರು ರೀತಿಯಲ್ಲಿ ವರ್ಗೀಕರಿಸಬಹುದು.

 ಕಿನ್ನರ ಕಥೆಯ ನಾಯಕ ಅನ್ವೇಷಕನಾಗಿ, ನಿರೀಕ್ಷಿತನಾಗಿ ಮತ್ತು ವಿವಾಹಾರ್ಥಿಯಾಗಿ ಕಾಣಿಸಿಕೊಳ್ಳುತ್ತಾನೆ. ನಾವು ಎಂಥೆಂಥ ಉತ್ತಮಗುಣಗಳಿರಬೇಕೆಂದು ಬಯಸುತ್ತೇವೆಯೋ ಅವೆಲ್ಲ ಅವನಲ್ಲಿರುತ್ತವೆ. ಮುಖ್ಯವಾಗಿ ಧೈರ್ಯ, ಜಾಣತನ, ಶಾಂತತೆ ಚಿತ್ತಸ್ಥೈರ್ಯ, ಔದಾರ್ಯ, ಬುದ್ಧಿವಂತಿಗೆ, ಮಾತಿಗೆ ಕಿವಿಗೊಡುವಿಕೆ, ದಯಾಪರತೆ ಮತ್ತು ಸಭ್ಯತೆಗಳು ಎದ್ದುಕಾಣುವ ಗುಣಗಳಾಗಿರುತ್ತವೆ. ನಾಯಿಕೆಯಲ್ಲಿ ಧೈರ್ಯವೂಂದನ್ನು ಬಿಟ್ಟು ಉಳಿದೆಲ್ಲ ಗುಣಗಳೂ ಸಮನಾಗಿ ಕಾಣಬರುತ್ತವೆ. ನಾಯಕನಲ್ಲಿ ಯಾವುದೇ ಲೋಪದೋಷಗಳ ಸಾಧ್ಯತೆ ಇರುವುದಿಲ್ಲ. ಆದ್ದರಿಂದ ನಾಯಕನ ಪಾತ್ರದಲ್ಲಿ ಸಾಮಾನ್ಯವಾಗಿ ವಿಕಾಸ ಕಾಣದಿರುವುದು. ವಿಶೇಷ ವಿಚಾರವಾಗುತ್ತದೆ. ಪ್ರಾರಂಭದಲ್ಲಿ ಕಾಣಿಸಿಕೊಂಡ ಒಳ್ಳೆಯತನ ಮುಕ್ತಾಯದವರೆವಿಗೂ ಹಾಗೆಯೇ ಇರುತ್ತದೆ. ಇದಕ್ಕೆ ಅಪವಾದಗಳಿದ್ದರೂ ಅಪೂರ್ವ. ಕಿನ್ನರ ಕಥೆಯ ಅಸಂಖ್ಯಾತ ವರ್ಗಗಳಲ್ಲಿ ನಾಯಕ ಇಬ್ಬರು ದಡ್ಡ ಸೋದರರನ್ನೂ ನಾಯಿಕೆ ಇಬ್ಬರು ಅಸೂಯಪರ ಸೋದರಿಯರನ್ನೂ ಪಡೆದಿರುತ್ತಾರೆ. ಈ ಸೋದರ ಸೋದರಿಯರು ಉದ್ದಿಷ್ಟ ಕಾರ್ಯಕ್ಕೆ ಪ್ರಯತ್ನಿಸಿ ದುಃಖಿತರಾದಾಗ ನಾಯಕ ಅಥವಾ ನಾಯಿಕೆ ಅವರನ್ನು ಕೊನೆ ಮುಟ್ಟಿಸುತ್ತಾರೆ. ಪಾತ್ರಗಳಿಗೆ ಸಂಬಂಧಿಸಿದಂತೆ ಕಿನ್ನರ ಕಥೆಯ ವಿಶೇಷ ಲಕ್ಷಣವೊಂದೆಂದರೆ, ನಾಯಕ ಸ್ವಯಂ ತನ್ನ ಪಾತ್ರದ ಕೆಲಸ ಮಾಡದಿರುವುದು. ಇಂಥ ಮಾದರಿಗಳಲ್ಲಿ ಪ್ರಮುಖ ಕೆಲಸವೆಲ್ಲ ಅತಿಮಾನುಷ ಅಥವಾ ಅದ್ಭುತ ಸಹಾಯಕರಿಂದ ನಡೆದು ಹೋಗುತ್ತದೆ.

 ಕಿನ್ನರ ಕಥೆಯ ಅತಿಮುಖ್ಯ ಸಮಸ್ಯೆಯೆಂದರೆ, ನಾಯಕ ಅಥವಾ ನಾಯಿಕೆಯರು ಕಿರಿಯ ಮಗ ಅಥವಾ ಮಗಳಾದ ಚಿತ್ರಿತವಾಗಿರುವುದು. ಇವರು ಕಥಾ ಪ್ರಾರಂಭದಲ್ಲಿಯೇ ದುಃಸ್ಥಿತಿಯಲ್ಲಿರುವಂತೆ ವರ್ಣಿತವಾಗಿರುತ್ತದೆ. ನಾಯಕನಾದ ಕಿರಿಯ ಮಗ ತನ್ನ ಬಂಧುವರ್ಗದಿಂದ ವಂಚಿತನಾಗಿರುತ್ತಾನೆ; ಹಾಗೆಯೇ ನಾಯಿಕೆ ಕ್ರೂರ ಕಥನ ಮಾದರಿಗಳಲ್ಲಿ ಎಷ್ಟೋ ಸಾರಿ ನಾಯಕ ಅಕ್ರಮವಾಗಿ ಹುಟ್ಟಿದ ಅನಾಥ ಅಥವಾ ವಿಧವೆಯ ಮಗನಾಗಿರುತ್ತಾನೆ. ಕೆಲವು ಕಥೆಗಳಲ್ಲಿ ಆತ ಮಂದ ಬುದ್ಧಿಯವನಾಗಿದ್ದು. ಬೌದ್ಧಿಕ ಎಚ್ಚರ ಅವನಲ್ಲಿ ನಿಧಾನವಾಗಿ ಬರುವಂತೆ ಚಿತ್ರಿತವಾಗಿರುತ್ತದೆ. ಆದ್ದರಿಂದ ಇಲ್ಲಿಯ ನಾಯಕ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುತ್ತ ಸ್ವಸಾಮಥ್ರ್ಯದಿಂದ ಮೇಲಕ್ಕೆ ಬಂದ ವ್ಯಕ್ತಿಯಾಗಿರುತ್ತಾನೆ.

 ಹೀಗೆ ಕಿನ್ನರ ಕಥೆಗಳಲ್ಲಿ ಕಿರಿಯ ಮಗನೇ ನಾಯಕನಾಗಿರುವುದಕ್ಕೆ ಕಾರಣವನ್ನು ಹುಡುಕುತ್ತ ಮಾನವ ಶಾಸ್ತ್ರಜ್ಞರು ಕೆಲವು ಊಹೆಗಳನ್ನು ಮಾಡಿರುವುದುಂಟು. ಪ್ರಾಚೀನ ಕಾಲದಲ್ಲಿ ಆಸ್ತಿ ಹಕ್ಕು ಕಿರಿಯ ಮಗನ ಮೂಲಕ ನಡೆದು ಬರುತ್ತಿದ್ದ ಪದ್ಧತಿಯಿರುತ್ತಿದ್ದುದೇ ಕಾರಣವೆಂದು ಕೆಲವರು ಹೇಳುತ್ತಾರೆ. ಇದನ್ನು ಒಂದು ಪಕ್ಷ ಒಪ್ಪಿಕೊಂಡರೂ ಪಿತ್ರಾರ್ಜಿತ ಆಸ್ತಿ ಕಿರಿಯ ಮಗನಿಗೆ ಹೋಗಲು ಆತ ಇತರರಿಗಿಂತ ಹೆಚ್ಚು ಯೋಗ್ಯ ಎನ್ನುವುದು ಸರಿಯಾಗಲಾರದು. ಈ ದೃಷ್ಟಿಯನ್ನೇ ಇಟ್ಟುಕೊಂಡು, ಹಿರಿಯ ಮಗನ ಮೂಲಕ ಆಸ್ತಿ ವಿತರಣೆಯಾಗುತ್ತಿದ್ದ ಪದ್ಧತಿ ಇದ್ದ ಕಡೆ ಹಿರಿಯ ಮಗನೇ ನಾಯಕನಾಗಿರಬೇಕಾಗಿದ್ದಿತಲ್ಲ ಎಂದೂ ವಾದಿಸಬಹುದು. ಆದರೆ ಇವೆಲ್ಲ ತರ್ಕವಾಗುತ್ತದೆಯಷ್ಟೆ. ಇಂಥ ಯಾವುದೇ ವಿಚಾರ ಅನಾವಶ್ಯಕವೆನಿಸಿದರೂ ಬೆಲೆಯಿರುವುದಿಲ್ಲವೆಂದು ಹೇಳಲಾರವು. ಕಡೆಗೆ, ಕಥೆಗಳ ಮೂಲಕ ಪ್ರಾಚೀನ ಜೀವನದ ಬಗ್ಗೆ ಕೆಲವು ಹೊಳಹುಗಳಾದರೂ ದೊರಕಬಹುದು. ಇದಕ್ಕೆ ಬದಲಾಗಿ ಕೇವಲ ಸಾಹಿತ್ಯಿಕ ತಂತ್ರಕ್ಕಾಗಿ ಕಿರಿಯ ಮಗನಿಗೆ ಗುರುತ್ವ ಕೇಂದ್ರವನ್ನು ವರ್ಗಾಯಿಸಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ರೀತಿಯ ತಂತ್ರ ಬಹುತೇಕ ಸಾಹಿತ್ಯಿಕ ಕೃತಿಗಳಾಗಿರುವ ಕಿನ್ನರ ಕಥೆಗಳಲ್ಲಿ ಆಶ್ಚರ್ಯವಾದ ವಿಚಾರವಾಗಲಾರದು.

 ಈ ಸಮಯದಲ್ಲಿಯೇ ಇನ್ನೊಂದು ಸಂಗತಿಯನ್ನು ಹೇಳಿಬಿಡಬಹುದು. ಕಿನ್ನರ ಕಥೆಯಲ್ಲಿ, ನಾಯಕ ರಾಜಕುಮಾರಿಯನ್ನು ಮದುವೆಯಾದ ತರುವಾಯ ಮಾವನ ಸಾಮ್ರಾಜ್ಯವನ್ನು ಪಡೆಯುವುದು ಒಂದು ರೀತಿಯಾಗಿದೆ. ಇದಕ್ಕೆ ಕಾರಣವನ್ನು ಹುಡುಕುತ್ತ, ಇಂಥ ಕಥೆಗಳು ಉದಯವಾದಾಗ, ಸಾಮ್ರಾಜ್ಯಗಳು ಹಿರಿಯ ಮಗನ ಮೂಲಕ ಹೋಗದೆ, ಮಗಳ ಮೂಲಕ ಹೋಗುತ್ತಿದ್ದುದೇ ಕಾರಣವೆಂದು ಮಾನವ ಶಾಸ್ತ್ರೀಯ ಪಂಥ ವಿಚಾರ ಮಾಡಿದೆ. ಆದರೆ ಇದು ಸಾರ್ವತ್ರಿಕವಾಗಿತ್ತೆಂದು ಹೇಳಲಾಗುವುದಿಲ್ಲ. ಇದಲ್ಲದೆ, ಹಿರಿಯ ಮಗನ ಮೂಲಕ ಸಾಮ್ರಾಜ್ಯ ಹೋಗುತ್ತಿದ್ದ ಪರಂಪರೆಗೆ ನಿದರ್ಶನಗಳಾಗಿ ಹಲವಾರು ಕಥೆಗಳು ಇರುವುದರಿಂದ ಈ ವಿಚಾರಕ್ಕೆ ಯಾವುದೇ ಮಾನವಶಾಸ್ತ್ರೀಯ ನಿರ್ದಿಷ್ಟ ಕಾರಣವನ್ನು ಕೊಡುವುದು ಕಷ್ಟವಾಗುತ್ತದೆಂದು ಹೇಳಬಹುದು,

 ಕಿನ್ನರ ಕಥೆಗಳಲ್ಲಿ ನಾಯಕ ಮತ್ತು ನಾಯಿಕೆಯರನ್ನು ಬಿಟ್ಟರೆ, ಪಾತ್ರವರ್ಗದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವವರೆಂದರೆ ಸಹಾಯಕ ವರ್ಗವೇ ಆಗಿದೆ. ನಾಯಕನ ಕಾರ್ಯನಿರ್ವಹಣೆಯಲ್ಲಿ ಇವರ ಪಾತ್ರ ವೈವಿಧ್ಯಪೂರ್ಣವಾದುದು. ಇವರ ಕಾರ್ಯ ಎರಡು ತೆರನಾದುದು; ಒಂದು, ನಾಯಕನಿಗೆ ಸಲಹೆ ಕೊಡುವುದಕ್ಕೆ ಮಾತ್ರ ಪರಿಮಿತವಾದ ವರ್ಗ; ಎರಡು, ಕಾರ್ಯದ ಪ್ರಧಾನ ಹಾಗೂ ಕಷ್ಟದ ಭಾಗವನ್ನುವಹಿಸುವ ಸಹಾಯಕ ವರ್ಗ. ಮೊದಲನೆಯದರಲ್ಲಿ ನಾಯಕನ ಕೆಲಸ ಸಲಹೆ ತೆಗೆದುಕೊಂಡರೂ ಸ್ವಂತ ಸಾಧನೆಯ ಮೇಲೆ ನಿಂತಿರುತ್ತದೆ; ಆದರೆ ಎರಡನೆಯದರಲ್ಲಿ ನಾಯಕನ ಕಾರ್ಯ ಸುಲಭಗೊಳ್ಳುತ್ತದೆ. ಇದರಿಂದ ಒಂದು ಮಾತು ಮಾತ್ರ ಸತ್ಯ; ನಾಯಕ ಎಷ್ಟೇ ಗುಣಸಂಪನ್ನನಾಗಿದ್ದರೂ ಸಹಾಯಕರಿಲ್ಲದೆ ಜಯ ಪಡೆಯಲಾರ. ಇಂಥ ಕರುಣಾಳು ಸಹಾಯಕರನ್ನು ಪ್ರಾಣಿಗಳು, ಅತಿಮಾನುಷ ಶಕ್ತಿಗಳು, ಮತ್ತು ಅಚೇತನ ವಸ್ತುಗಳೆಂದು ಮೂರು ವಿಭಾಗ ಮಾಡಿಕೊಳ್ಳಬಹುದು. ನಾಯಕ ಇವುಗಳ ಸ್ನೇಹವನ್ನು ದಯಾಪರ ಕಾರ್ಯದಿಂದ ಮತ್ತು ಸೌಜನ್ಯದ ನಡೆವಳಿಕೆಯಿಂದ ಗಳಿಸಿಕೊಂಡಿರುತ್ತಾನೆ. ಆದ್ದರಿಂದ, ಕೃತಜ್ಞತೆಯನ್ನು ಉಕ್ಕಿಸುವಂಥ ಯಾವ ಕಾರ್ಯವನ್ನೂ ಮಾಡದೆ ಅವುಗಳ ಸಹಾಯವನ್ನು ನಾಯಕ ಪಡೆಯಲಾರ ಎಂಬುದು ಒಂದು ಸುನಿಶ್ಚಿತವಾದ ಸಂಗತಿ. ಸಾಮಾನ್ಯವಾಗಿ ಈ ಸಹಾಯಕ ವರ್ಗದಲ್ಲಿ ಅತಿಮಾನುಷ ರೀತಿಯ ಸಹಾಯಕರೇ ಹೆಚ್ಚು ಕಾಣಿಸಿಕೊಳ್ಳುವುದು. ಇನ್ನೊಂದು ವಿಷಯವೆಂದರೆ, ಕೆಲವು ಸಂದರ್ಭಗಳಲ್ಲಿ ಸಹಾಯ ಅನೈಚ್ಛಿಕವಾಗಿ ಒದಗಿ ಬರುವುದು. ದೆವ್ವಗಳ ಅಥವಾ ಅತಿಮಾನುಷ ಶಕ್ತಿಗಳ ಅಶರೀರವಾಣಿಯೊಂದನ್ನು ಕೇಳಿ, ಅವುಗಳ ಆದೇಶದಂತೆ ನಾಯಕ ಮುಂದೆ ಕಾರ್ಯ ಪ್ರವೃತ್ತನಾಗುವುದು. ಈ ಆಶಯ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇನ್ನು ಕೆಲವು ಸಂದರ್ಭಗಳಲ್ಲಿ ನಾಯಕನಿಗೆ ಸಹಾಯಕರೇ ಇರುವುದಿಲ್ಲ. ಆದರೆ ಕಾರ್ಯವನ್ನು ಸುಗಮಗೊಳಿಸಲು ಅದ್ಭುತ ವಸ್ತುಗಳನ್ನು ಹೊಂದಿರಬಹುದು. ಉದಾಹರಣೆಗೆ, ಮಂತ್ರದ ಉಂಗುರ, ಮಂತ್ರದ ಟೋಪಿ, ಮಂತ್ರದ ದೊಗಲೆ ಅಂಗಿ, ಮಾಯದ ಚಾಪೆ, ಮಂತ್ರದಂಡ-ಮೊದಲಾದುವುಗಳಿಂದ ನಾಯಕನಿಗೆ ಸಹಾಯಕವಾಗಿ ಕಥೆ ಅದ್ಭುತ ವಾತಾವರಣದಲ್ಲಿ ಬೆಳೆಯಬಹುದು.

 ಈಗ ಪಾತ್ರವರ್ಗದ ಪ್ರತಿನಾಯಕರನ್ನು ಪರಿಶೀಲಿಸಬಹುದು. ಪ್ರತಿಯೊಂದು ಒಳ್ಳೆಯ ಕಿನ್ನರ ಕಥೆಯಲ್ಲೂ ಈ ಖಳನಾಯಕರು ಕಾಣಬರುವರು. ಇವರನ್ನು ಸಮೀಪವರ್ತಿಗಳು, ಮತ್ತು ಕಾರ್ಯಗಳು ಸಂಬಂಧ ಕಲ್ಪಿಸುವ ತನಕ ಪರಸ್ಪರ ಸಂಬಂಧವಿಲ್ಲದವರು ಎಂಬುದಾಗಿ ಎರಡು ವಿಧ ಮಾಡಿಕೊಳ್ಳಬಹುದು. ಮೊದಲ ವರ್ಗದಲ್ಲಿ ಹಗೆತನದ ಚಿಕ್ಕಪ್ಪಂದಿರು, ಮಲತಾಯಿಯರು, ಅಸೂಯಾಪರ ಸೋದರ ಸೋದರಿಯರು ಹಾಗೂ ಮಲ ಸೋದರ ಸೋದರಿಯರು, ವಿಶ್ವಾಸ ಘಾತಕ ಜೊತೆಗಾರರು-ಮೊದಲಾದವರು ಬರುವರು. ಎರಡನೆಯ ವರ್ಗದಲ್ಲಿ ರಾಕ್ಷಸರು, ಪ್ರೇತಗಳು, ದೆವ್ವಗಳು ಐಂದ್ರಜಾಲಿಕರು, ಮಾಟಗಾರರು, ಬೃಹದ್ದೇಹಿಗಳು, ಸೈತಾನರು ಮುಂತಾದವರು ಸೇರಿಕೊಳ್ಳುವರು. ಇಲ್ಲಿ ಒಂದು ವಿಮರ್ಶಾರ್ಹ ವಿಚಾರವೆಂದರೆ ಮಲಸೋದರ ಸೋದರಿಯರ ಅಸೂಯಾ ಕಲ್ಪನೆಗೆ ವಾಸ್ತವಿಕತೆಯ ನಿದರ್ಶನ ದೊರೆತರೂ ಸೋದರ ಸೋದರಿಯರ ಅಸೂಯೆಗೆ ಕಾರಣ ಹೇಳುವುದು ಕಷ್ಟ ಎಂಬುದು. ಮೇಲಿನ ಎರಡು ವರ್ಗಗಳಲ್ಲಿ ಮೊದಲ ಗುಂಪಿನವರೇ ನಿಜವಾದ ಖಳನಾಯಕರು. ಮೊದಲ ಗುಂಪಿನವರಿಗೂ ನಾಯಕನಿಗೂ ಪ್ರತಿಸಂಬಂಧ ಇದ್ದರೆ, ಈ ಯಾವುದೇ ಸ್ವಾಭಾವಿಕ ಉಪಕಾರದ ಹಂಗು ಎರಡನೆಯ ಗುಂಪಿನವರಿಗೆ ಇರುವುದಿಲ್ಲ. ಆದರೆ, ಎರಡು ವರ್ಗದ ಖಳನಾಯಕರೂ ಕಡೆಗೆ ಶಿಕ್ಷೆಗೆ ಗುರಿಯಾಗುತ್ತಾರೆ. ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಪ್ರತಿನಾಯಕರ ಚಿತ್ರ ಇದು.

 ಇನ್ನೂ ಎರಡನೆಯದಾಗಿ ಕಥನಕ್ರಿಯೆಗೆ ಸಂಬಂಧಿಸಿದ ವಿಷಯ. ಕಥನಕ್ರಿಯೆಗೆ ನಾಯಕ ಒಂದಲ್ಲ ಒಂದು ವಿಧದಲ್ಲಿ ಸಂಬಂಧಪಟ್ಟಿರುತ್ತಾನೆ. ಅವನ ಸಾಧನೆಯ ಇತಿಹಾಸವೇ ಕಥೆ. ಅವನ ಬಗೆಗಿನ ಘಟನಾಪರಂಪರೆಗಳೇ ವಸ್ತು. ಕಥನಕ್ರಿಯೆಯ ನಾಯಕನ ಸಾಮಾನ್ಯವಾದ ವಿಷಯವೊಂದೆಂದರೆ ಅನ್ವೇಷಣಾ ಆಶಯ. ಕಥೆ ಸುಂದರವಾಗಿರಲು ಇದು ಸಹಾಯ ಮಾಡಿದೆ. ಮನವನ್ನು ರಂಜಿಸುವ ಮೂಲಕ ತೃಪ್ತಿ ಪಡಿಸುವ ಕಾರ್ಯ ಇದರದು. ಕಥೆ ಕ್ರಿಯಾಶೀಲವಾಗುವುದೇ ಇಂಥ ಆಶಯಗಳ ಮೇಲೆ. ಈ ಅನ್ವೇಷಣೆ ಕಥಾವರ್ಗದಿಂದ ಕಥಾವರ್ಗಕ್ಕೆ ವ್ಯತ್ಯಾಸವಾಗುತ್ತ ಹೋಗುತ್ತದೆ. ಇಂಥ ಅನ್ವೇಷಣೆಯ ಹಲವು ರೀತಿಗಳೆಂದರೆ ಆದರ್ಶ ಸ್ತ್ರೀ, ಅದ್ಭುತ ಕುದುರೆ, ಅದ್ಭುತ ಪಕ್ಷಿ, ಜೀವಜಲ, ಶಕ್ತ್ಯಾಯುಧ, ಒಗಟು -ಇತ್ಯಾದಿಗಳು. ಕ್ರಿಯೆಯ ಮತ್ತೊಂದು ಗುಂಪೆಂದರೆ ಕಾವಲು ಕಾಯುವುದು. ಉದಾಹರಣೆಗಾಗಿ, ಮೂರು ಜನ ಸೋದರರು ಮೂರು ರಾತ್ರಿಗಳಲ್ಲಿ ಉದ್ದಿಷ್ಟ ವಿಷಯವೊಂದಕ್ಕೆ ಕಾವಲು ಕಾಯುವುದು. ಹಿರಿಯರಿಬ್ಬರು ಸತ್ತರೆ ಕಿರಿಯವ ಪರೀಕ್ಷೆಯಲ್ಲಿ ಗೆಲ್ಲುವುದು. ದುರ್ಗವನ್ನು ದೆವ್ವಗಳಿಂದ ಮುಕ್ತ ಮಾಡುವುದೊಂದು ಗಮನಾರ್ಹ ಆಶಯ. ಕಾರ್ಯಕ್ಕೆ ಪ್ರವೃತ್ತಿಸುವ ಪ್ರತಿ ಮನುಷ್ಯನನ್ನೂ ಅವು ಕೊಂದು ಹಾಕಿ ಬಿಡುತ್ತವೆ. ಆದರೆ ನಾಯಕ ತನ್ನ ಧೈರ್ಯ ಹಾಗೂ ಜಾಗರೂಕತೆಗಳಿಂದಾಗಿ, ತಾನು ಪಡೆದಿರುವ ಮಂತ್ರಶಕ್ತಿಯಿಂದಾಗಿ ದೆವ್ವಗಳನ್ನು ಕೆಡವಿ ಕೋಟೆಯನ್ನು ಮುಕ್ತಗೊಳಿಸುತ್ತಾನೆ. ತತ್‍ಫಲವಾಗಿ ರಾಜಕುಮಾರಿಯನ್ನು ಬಹುಮಾನವಾಗಿ ಪಡೆಯುತ್ತಾನೆ. ಕ್ರಿಯೆಯ ಇನ್ನೊಂದು ಗುಂಪೆಂದರೆ ನಾಯಕ ವಧುವನ್ನು ಗೆಲ್ಲಲು ಹಲವಾರು ಪರೀಕ್ಷೆಗೆ ಒಳಗಾಗುವುದು. ಉದಾಹರಣೆಗೆ ರಥದ ಸ್ಪರ್ಧೆ, ದ್ವಂದ್ವಯುದ್ಧ, ಒಗಟು ಬಿಡಿಸುವುದು, ಚದುರಂಗದ ಆಟ, ಇತ್ಯಾದಿ. ಇಂಥ ಪರೀಕ್ಷೆಗಳಲ್ಲಿ ಗೆದ್ದರೆ ವಧು ದೊರಕುವಳು. ಇಲ್ಲದಿದ್ದರೆ ಇಲ್ಲ. ಕೆಲವು ಸಾರಿ ನಾಯಕನ ಮದುವೆ ಮೊದಲಿನ ವಧುವಿಗೆ ಬದಲಾಗಿ ಬೇರೆ ವಧುವಿನ ಜೊತೆಯಲ್ಲಿ ನಿಶ್ವಯವಾದಾಗ ಅನುಮಾನ ದೊಡ್ಡದಾಗುತ್ತದೆ. ಆದರೆ ಕ್ರಿಯೆ ಇದ್ದಕ್ಕಿದ್ದ ಹಾಗೆ ಮೂಲಕ್ಕೆ ತಿರುಗಿ ಎಲ್ಲರನ್ನು ಚಕಿತಗೊಳಿಸಿ ಸುಖಾಂತದಲ್ಲಿ ಮುಕ್ತಾಯವಾಗುತ್ತದೆ. ಇದು ಕಿನ್ನರ ಕಥೆಯ ರೋಮಾಂಚಕತೆಯ ಲಕ್ಷಣವನ್ನು ಹೇಳುತ್ತದೆ.

 ಮೂರನೆಯದಾಗಿ ಕಿನ್ನರ ಕಥೆಗೂ ನೀತಿಗೂ ಇರುವ ಸಂಬಂಧವನ್ನು ಕುರಿತ ವಿಚಾರಕ್ಕೆ ಬರಬಹುದು. ಕಿನ್ನರ ಕಥೆಗಳಲ್ಲಿ ನಿತ್ಯಾತ್ಮಕ ಮೌಲ್ಯಗಳ ಅಸ್ತಿತ್ವವನ್ನು ಕುರಿತು ಕೆಲವರು ಹೇಳುತ್ತಾರೆ. ಆದರೆ ಈ ಕಥೆಗಳು, ನೀತಿಭಾವನೆಗಳ ಪ್ರತಿನಿಧಿಗಳೆಂದು ಹೇಳಲಾಗುವುದಿಲ್ಲ. ಕಥೆಯಲ್ಲಿ ಬರುವ ಖಳನಾಯಕನ ಶಿಕ್ಷೆಯಿಂದಾಗಿ ಕೆಲವರು ಇಂಥಾ ಭಾವನೆಗಳನ್ನು ರೂಪಿಸಿಕೊಂಡಿರಲು ಸಾಕು. ಆದರೆ ಇಂಥ ಕಡೆ ಸಂವಿಧಾನಾತ್ಮಕ ಕಾನೂನನ್ನು ಕಾಣದೆ, ಜನರ ಸಾಮಾನ್ಯ ಜ್ಞಾನವಷ್ಟನ್ನು ಮಾತ್ರ ನಿರೀಕ್ಷಿಸಬೇಕಾಗುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೆ ಕಿನ್ನರ ಕಥೆಗಳು ಮತಧರ್ಮಶಾಸ್ತ್ರದ ಚಿಂತನೆಯಿಂದ ಮುಕ್ತಗೊಂಡಿರುತ್ತವೆ. ಯಾವುದೇ ತತ್ತ್ವಶಾಸ್ತ್ರದ ಅಥವಾ ಭಾವನಾಶಾಸ್ತ್ರದ ಚಿಂತನೆಯಿಂದ ಮುಕ್ತಗೊಂಡಿರುತ್ತವೆ. ಯಾವುದೇ ತತ್ತ್ವಶಾಸ್ತ್ರದ ಆದರ್ಶವನ್ನು ಇವು ಹೇಳುವುದಿಲ್ಲ. ಆದರೆ, ಕೆಲವು ಕಥೆಗಳಲ್ಲಿ ಕಾಣಿಸಿಕೊಳ್ಳುವ ಒಂದೇ ಒಂದು ತಾತ್ತ್ವಿಕ ದೃಷ್ಟಿಯೆಂದರೆ ಅದೃಷ್ಟವಾದ. ಉದಾಹರಣೆಗೆ, ಮಗನಿಂದಲೊ, ಮಗಳ ಮಗನಿಂದಲೊ ಅಥವಾ ತಂಗಿಯ ಮಗನಿಂದಲೊ ತಾನು ಕೊಲ್ಲಲ್ಪಡುತ್ತೇನೆಂದು ದೈವವಾಣಿಯೊಂದು ತಿಳಿಸುವುದು. ಅದರಿಂದ ಮುಕ್ತನಾಗಲು ಪ್ರಯತ್ನಿಸಿದರೂ ಅದು ಹೇಗೋ ನಡೆದು ಹೋಗುವುದು. ಇನ್ನೊಂದು ಗಮನಾರ್ಹ ಅಂಶವೆಂದರೆ, ಕಿನ್ನರ ಕಥೆಗಳಲ್ಲಿನ ಧಾರ್ಮಿಕ ಅಂಶ ಭೂತ ವಿದ್ಯೆಯ ಕಡೆಗೆ ಕೈ ತೋರಿಸುತ್ತದೆ-ಎಂಬುದಾಗಿದೆ. ಆದರ, ಈ ಯಾವುದೇ ಭೂತಗಳು ಸುವ್ಯವಸ್ಥಿತವಾದ ಅಥವಾ ಚೆನ್ನಾಗಿ ಬೆಳೆವಣಿಗೆ ಹೊಂದಿದ ಧಾರ್ಮಿಕ ಪದ್ಧತಿಯ ಭಾಗವನ್ನು ರೂಪಿಸುವುದಿಲ್ಲ. ನಿರ್ದಿಷ್ಟ ವರ್ಗದ ಇತಿಹಾಸವನ್ನು ಹುಡುಕುವುದರಲ್ಲೂ ಇದು ನೆರವಾಗುವುದಿಲ್ಲ. ಇದರ ಕಾರ್ಯವೆಲ್ಲ ಪಾಠವೊಂದರ ರಾಷ್ಟ್ರಿಯತೆಯನ್ನು ನಿಗದಿಸುವಲ್ಲಿ ಕೊನೆಗೊಳ್ಳುತ್ತದೆ.

 ನಾಲ್ಕನೆಯದಾಗಿ, ಕಿನ್ನರ ಕಥೆಯ ತಂತ್ರವನ್ನು ಕುರಿತಂತೆ ಕೆಲವು ವಿಚಾರಗಳನ್ನೀಗ ಪ್ರಸ್ತಾಪಿಸಬಹುದು. ಕಿನ್ನರ ಕಥೆಗಳು ಕೌಶಲಪೂರ್ಣವಾದ ರಚನೆಗಳು. ಈ ದೃಷ್ಟಿಯಿಂದ, ಕಿನ್ನರ ಕಥೆಯಲ್ಲಿ ಬರುವ ಕೆಲವು ಸಾಂಪ್ರದಾಯಿಕ ನಿಯಮಗಳು ಗಮನಾರ್ಹವಾದವು. ಇವುಗಳಲ್ಲಿ ಎರಡು, ಮೂರು, ನಾಲ್ಕು ಮತ್ತು ನಲವತ್ತರ ಸಂಖ್ಯೆಗಳು ಮತ್ತೆ ಮತ್ತೆ ಬರುವುದು ಪ್ರಮುಖವಾದ ಅಂಶವಾಗುತ್ತದೆ. ಎರಡರ ಸಂಖ್ಯೆಗೆ ಅವಳಿ ಸೋದರರು ನಿದರ್ಶನವಾಗುತ್ತದೆ. ಮೂರರ ಸಂಖ್ಯೆ ತುಂಬ ವೈವಿಧ್ಯಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ. ಮೂರು ದಿನಗಳು, ಮೂರು ತಿಂಗಳುಗಳು ಮತ್ತು ಮೂರು ವರ್ಷಗಳು ಕಾಲಮಿತಿಯನ್ನು ಸೂಚಿಸುತ್ತವೆ, ಮೂರರ ಸಂಖ್ಯೆ ಪಾತ್ರಗಳಿಗೆ ಮಾತ್ರವಲ್ಲದೆ ಘಟನೆಗಳಿಗೂ ಅನ್ವಯಿಸುತ್ತದೆ. ಮಂತ್ರದಿಂದ ಮಾಡಿದ ದುರ್ಗ ಮೂರು ರಾತ್ರಿಗಳು ರಕ್ಷಿತವಾಗಿರುವುದು, ವಿಷಯವನ್ನು ತಿಳಿಸುವ ಮೂರು ಜನ ಮುದುಕರನ್ನು ಅನ್ವೇಷಣಾಕಾರ ಭೇಟಿಯಾಗುವುದು, ವಧುವನ್ನು ಮದುವೆಯಾಗಲು ವರ ಮೂರು ಪ್ರಶ್ನೆಗಳಿಗೆ ಉತ್ತರಿಸಬೇಕಾದುದು ಅಥವಾ ಮೂರು ಒಗಟುಗಳನ್ನು ಒಡೆಸಬೇಕಾಗುವುದು ಅಥವಾ ಮೂರು ಕೆಲಸಗಳನ್ನು ಮಾಡಬೇಕಾದದು-ಮುಂತಾದುವು ಇದಕ್ಕೆ ನಿದರ್ಶನ. ವಧುವಿನ ಆಯ್ಕೆಗೆ ಸಂಬಂಧಿಸಿದಂತೆ ಬರುವ ಮೂರು ಕಾರ್ಯಗಳನ್ನು ಕುಪಿನರಾಜ (ಕರ್ಣಾಟಕ ಜಾನಪದ ಕಥೆಗಳು) ಎಂಬ ಕಥೆಯಲ್ಲಿನಂತೆ ಹೊಲಕ್ಕೆ ರಾಗಿ ಬಿತ್ತಿ, ಉಳಿಸಿ ಆದ ಮೇಲೆ ಮತ್ತೆ ರಾಗಿಯನ್ನು ಆಯ್ದು ರಾಶಿಮಾಡುವ ಹಾಗೆ ಹೇಳುವುದು, ಉಂಗುರವನ್ನು ಬಾವಿಗೆ ಹಾಕಿ ತೆಗೆಯಲು ಹೇಳುವುದು, ಇಂದ್ರನ ಮಗಳನ್ನೇ ಹೋಲುವ ಸುಂದರಿಯನ್ನು ಸೃಷ್ಟಿಸಿ ವಧುವನ್ನು ಆರಿಸಿಕೊಳ್ಳೆಂದು ತಿಳಿಸುವುದು-ಇವನ್ನು ನೋಡಬಹುದು. ನಾಯಕನಿಗೆ ಸಹಾಯಕರಾಗಿ ಬರುವ ಇರುವೆ, ಕಪ್ಪೆ ಮತ್ತು ಚಿಟ್ಟೆಗಳು ಈ ಕಾರ್ಯವನ್ನು ನಿರ್ವಹಿಸುತ್ತವೆ. ಅವಕ್ಕೆ ನಾಯಕ ಮೊದಲೇ ಸಹಾಯ ಮಾಡಿ ಅವನ್ನು ಕೃತಜ್ಞರನ್ನಾಗಿ ಮಾಡಿರುತ್ತಾನೆ. ಮೂರಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿಚಾರವೆಂದರೆ, ಮೂರು ಕ್ರಮೇಣ ಕ್ರಿಯೆಯ ಗಾಢತೆಯನ್ನು ಪಡೆದುಕೊಂಡು, ಅದರ ಗುರುತ್ವಕೇಂದ್ರ ಮೂರನೆಯದರ ಮೇಲೆ ನಿಲ್ಲುವುದು. ಉದಾಹರಣೆಗೆ, ರಾಜನ ಮೂರು ಜನ ಹೆಣ್ಣು ಮಕ್ಕಳಲ್ಲಿ ಮೂರನೆಯವಳು ಕಿರಿಯವಳಷ್ಟೇ ಅಲ್ಲದೆ ಸುಂದರಿಯೂ ನಾಯಿಕೆಯೂ ಆಗಿರುವುದು ಮತ್ತು ಮೂರು ಜನ ಗಂಡು ಮಕ್ಕಳಲ್ಲಿ ಕಿರಿಯವನಾದ ಮೂರನೆಯವನೇ ನಾಯಕನಾಗಿರುವುದು. ಇನ್ನು ನಾಲ್ಕು ಮತ್ತು ಏಳರ ಸಂಖ್ಯೆಗಳು ವಿರಳವಾಗಿ ಮಾತ್ರ ಕಾಣಿಸಿಕೊಳ್ಳುತ್ತವೆ. ನಲವತ್ತರ ಸಂಖ್ಯೆ ನಲವತ್ತು ದಿನಗಳ ಕಾಲಮಿತಿಯನ್ನು ಸೂಚಿಸುವಾಗ ಬರುತ್ತದೆ.

 ಮೇಲಿನ ಪ್ರಮುಖ ವಿಚಾರಗಳ ಜೊತೆಗೆ ಇನ್ನು ಕೆಲವು ಲಕ್ಷಣಗಳನ್ನು ಗುರುತಿಸಬಹುದು. ಕಿನ್ನರ ಕಥೆಗಳಲ್ಲಿ ವ್ಯಕ್ತವಾಗಿರುವ ಜಗತ್ತು ಸರ್ವೋತ್ತಮ ಎನ್ನಲಾಗದು. ಇದು ಸಾಕಷ್ಟು ಆದರ್ಶವಾದುದು. ಕೆಟ್ಟದು ಶಿಕ್ಷೆಗೆ ಒಳಗಾಗುತ್ತದೆ. ಒಳ್ಳೆಯವರು. ವೀರರಾದವರು ಮತ್ತು ಕೆಲವು ವೇಳೆ ದಡ್ಡರು ಹೇಡಿಗಳು ಕೂಡ ಅನಿವಾರ್ಯವಾಗಿ ಹರ್ಷಾಂತವಾಗಿ ಹೊರಬರುತ್ತಾರೆ. ಇದರ ಇನ್ನೊಂದು ಉಲ್ಲೇಖನೀಯ ಅಂಶವೆಂದರೆ ಪ್ರತಿನಾಯಕರನ್ನು ಬಿಟ್ಟರೆ ಇಲ್ಲಿ ಸಾವು ಎಂಬುದು ಇಲ್ಲ. ಇನ್ನು ಮುಂದಿನ ಲಕ್ಷಣ ರೂಪ ಪರಿವರ್ತನೆಗೆ ಸಂಬಂಧಿಸಿದುದು. ಮಂತ್ರದ ಸಾಮಥ್ರ್ಯದಿಂದ ವ್ಯಕ್ತಿಯನ್ನು ಕಲ್ಲಾಗಿ ಮಾಡುವುದು, ಮತ್ತೆ ಬದುಕಿಸುವುದು-ಹೀಗೆ. ಇದರಲ್ಲಿ ಮಂತ್ರದಂಡ, ಮರಿಜವಳೆಕಡ್ಡಿ, ಮಂತ್ರಿಸಿದ ನೀರು, ಶಾಪ ಮೊದಲಾದವು ಬರುತ್ತವೆ; ಮಾಟಗಾರರು, ದೇವತೆಗಳು, ರಾಕ್ಷಸರು, ಮಾಂತ್ರಿಕ ವಸ್ತುಗಳನ್ನು ಹೊಂದಿರುವವರು ಸಾಮಾನ್ಯವಾಗಿ ಈ ಕೆಲಸವನ್ನು ನಿರ್ವಹಿಸುತ್ತಾರೆ. ಇದಕ್ಕೆ ತುತ್ತಾದ ವ್ಯಕ್ತಿಗಳೆಂದರೆ ಕಾರ್ಯಸಾಧನೆಯಲ್ಲಿರುವ ನಾಯಕನೋ ಅಥವಾ ನಾಯಿಕೆಯೋ ಆಗಿರುತ್ತಾರೆ.

 ಕಿನ್ನರ ಕಥೆಗಳನ್ನು ಇತರ ಪ್ರಕಾರಗಳಂತೆಯೇ ಸಾಂಸ್ಕøತಿಕ ಮತ್ತು ಸಾಹಿತ್ಯಿಕ ದೃಷ್ಟಿಗಳೆರಡರಿಂದಲೂ ನೋಡಬೇಕಾಗುತ್ತದೆ. ಯಾವುದೇ ಒಂದು ರೀತಿಯಲ್ಲಿ ಮಾಡಿದ ಪರಿಶೀಲನೆ ಅಪೂರ್ಣವಾದುದೇ ಸರಿ. ಸಾಂಸ್ಕøತಿಕವಾಗಿ ನೋಡಿದಾಗ ಕಿನ್ನರ ಕಥೆಗಳು ಪುರಾತನ ಜಗತ್ತಿನ ಉಳಿಕೆಗಳೆಂದು ಕೆಲವರ ಅಭಿಪ್ರಾಯ. ಇದು ವಿಲಕ್ಷಣವಾದುದೇನೂ ಅಲ್ಲ. ಮಹಾಕಾವ್ಯಗಳಲ್ಲಿ ಇಂಥ ಪಳೆಯುಳಿಕೆಗಳನ್ನು ಪತ್ತೆ ಹಚ್ಚುವಂತೆ ಈ ಕಥೆಗಳಲ್ಲಿಯೂ ಕಾಣಬಹುದೆನಿಸುತ್ತದೆ. ಹಲವು ವೇಳೆ ಇಲ್ಲಿನ ಆಶಯಗಳು ನಿರ್ದಿಷ್ಟ ಕಥಾವರ್ಗ ರಚಿತವಾದ ಕಾಲಕ್ಕೆ ಸೇರಿದುವೆಂದು ಹೇಳಬಹುದು. ಉದಾಹರಣೆಗೆ, ಅವಳಿ ಆಶಯ ಮತ್ತು ವಧು ಅನ್ವೇಷಣೆಗಳನ್ನು ನೋಡಬಹುದು. ಆದರೆ ಇನ್ನು ಕೆಲವರು, ಕಿನ್ನರ ಕಥೆಗಳು ಬಹುತೇಕ ಸಾಹಿತ್ಯಿಕ ಸೃಷ್ಟಿಗಳೆಂದೇ ಹೇಳುತ್ತಾರೆ. ಬೇರೆ ಕಥಾ ಪ್ರಕಾರಗಳಿಗೆ ಹೋಲಿಸಿದಾಗ ಇವುಗಳಲ್ಲಿ ಸಾಹಿತ್ಯಾಂಶ ಹೆಚ್ಚು ಎಂಬುದು ಸತ್ಯವಾದ ಮಾತು. ಇದರ ಜನಪ್ರಿಯ ಕಲ್ಪಕತೆ ನಿಸ್ಸಂಶಯವಾಗಿ ಹಳೆಯ ಕಾಲದ ಕಾದಂಬರಿ ಮಾದರಿಯದೆಂದು ವಿದ್ವಾಂಸರು ಗುರುತಿಸಿರುವುದು ಸರಿಯೆನಿಸುತ್ತದೆ. ಕಿನ್ನರ ಕಥೆಗಳು 3-4 ಪುಟಗಳಿಂದ 30-40 ಪುಟಗಳ ತನಕ ದೊರೆಯುವುದೇ ಇದನ್ನು ಸಮರ್ಥಿಸುತ್ತದೆ. ಕಿನ್ನರ ಕಥೆಗಳ ಪ್ರಧಾನ ಉದ್ದೇಶ ಮನರಂಜನೆಯೇ ಆಗಿರಬೇಕು. ಇವು ಮಾನವ ವಿಕಾಸದ ಮೂರು ಪ್ರಸಿದ್ಧ ಹಂತಗಳನ್ನು ಪ್ರತಿನಿಧಿಸುವುದಿಲ್ಲವೆಂದೂ ಅಥವಾ ಆ ಹಂತಗಳನ್ನು ಇವುಗಳಲ್ಲಿ ನೋಡಲಾಗದೆಂದೂ ಇದಕ್ಕೆ ಈ ಕಥೆಗಳು ಅನಂತರದ ಸೃಷ್ಟಿಯಾಗಿರುವುದೇ ಕಾರಣವೆಂದೂ ಅಲೆಕ್ಸಾಂಡರ್ ಕ್ರಾಪ್ಟೆ ಅಭಿಪ್ರಾಯ ಪಟ್ಟಿದ್ದಾನೆ. ಆದ್ದರಿಂದ ಜನಪ್ರಿಯ ಕಥಾ ಪ್ರಕಾರಗಳಲ್ಲಿ ಪ್ರಾಯಶಃ ಇದು ಕಿರಿಯದಾಗುತ್ತದೆ. ಇಲ್ಲಿನ ಕಲಾತ್ಮಕ ದೃಷ್ಟಿ. ಅನಕ್ಷರಸ್ಥ ಜನತೆಯ ಪೂರ್ಣಸೃಷ್ಟಿಯೆಂಬುದನ್ನು ಹೇಳುತ್ತದೆ.

 ಇಲ್ಲಿ ಮತ್ತೊಂದು ಅಂಶವನ್ನು ಪ್ರಸ್ತಾಪಕ್ಕೆ ತರಬಹುದು. ಅದು ನಿರ್ದಿಷ್ಟ ದೇಶವೊಂದರ ಸಾಹಿತ್ಯದಲ್ಲಿಯೂ ಕಿನ್ನರ ಕಥೆಗಳು ಪ್ರವೇಶ ಮಾಡಿರುವಂಥದು. ಈ ಕಥೆಗಳು ಸೌಂದರ್ಯಾನುಭವದ ಸಾಧನಗಳಾಗಿದ್ದುದೇ ಇದಕ್ಕೆ ಕಾರಣವಿರಬಹುದು. ಆಯಾ ದೇಶಗಳ ಮಹಾಕಾವ್ಯ, ಕಥಾಸಾಹಿತ್ಯಗಳಲ್ಲಿ ಇವು ದೊರಕುತ್ತವೆ. ಹೀಗೆ ಬರವಣಿಗೆಯ ಮೂಲಕ ರಕ್ಷಿಸಿಕೊಂಡು ಬಂದಿರುವ ಇವುಗಳಿಂದ ಕೆಲಮಟ್ಟಗೆ ಜನಪದ ಕಿನ್ನರ ಕಥೆಗಳ ಕಾಲನಿರ್ದೇಶನಕ್ಕೆ ಸಹಾಯವಾಗುತ್ತದೆ. ಸಾಹಿತ್ಯಿಕ ಕಥೆಗಳ ಕಾಲ ಬಹುಮಟ್ಟಿಗೆ ಗೊತ್ತಿರುವುದೇ ಇದು ಸಾಧ್ಯವಾಗುವಂತೆ ಮಾಡುತ್ತದೆ. ಇದರಿಂದಾಗಿ, ವಾಚಕ ಸಂಪ್ರದಾಯ ಕಥೆಗಳ ಜೊತೆಯಲ್ಲಿ ಬರವಣಿಗೆಯಲ್ಲಿರುವ ಈ ಕಥೆಗಳು ಐತಿಹಾಸಿಕ ಪಾಠಗಳಾಗಿ ಕಾಣಿಸಿಕೊಳ್ಳುತ್ತವೆ.

 ಕಿನ್ನರ ಕಥೆ ತುಮಬ ವ್ಯಾಪಕವಾದ, ಜನಪ್ರಿಯವಾದ ಪ್ರಕಾರ, ಹತ್ತೊಂಬತ್ತನೆಯ ಶತಮಾನದ ಪ್ರಾರಂಭದಲ್ಲಿ ಜಾನಪದ ವೈಜ್ಞಾನಿಕ ಅಧ್ಯಯನ ಆರಂಭವಾದಾಗ ಮೊದಲ ಗಮನವನ್ನು ಸೆಳೆದದ್ದು ಕಿನ್ನರ ಕಥೆ. ಅದರಲ್ಲಿಯೂ ಜರ್ಮನಿಯ ಗ್ರಿಮ್ ಸೋದರರ ಕಥಾಸಂಕಲನ ಪ್ರಕಟವಾದ ಮೇಲಂತು, ಈ ದಿಶೆಯಲ್ಲಿ ಹೊಸ ಅಧ್ಯಾಯವೊಂದು ತೆರೆಯಿತೆನ್ನಬೇಕು, ಯೂರೋಪಿನಾದ್ಯಂತ ಜನಪದ ಕಥೆಯ ತುರ್ತುಸಂಗ್ರಹ ಕಾರ್ಯಕ್ಕೆ ಇದು ಅಪಾರ ಪ್ರಚೋದನೆಯನ್ನು ನೀಡಿತು. ಫಿನ್ಲೆಂಡಿನಲ್ಲಿ ಮೊದಲು ರೂಪಿತವಾದ ಚಾರಿತ್ರಿಕ-ಭೌಗೋಳಿಕ ವಿಧಾನಕ್ಕೆ ಕಿನ್ನರ ಕಥೆಗಳು ತುಂಬ ನೆರವಾದುವು.

 ಕಿನ್ನರ ಕಥೆಗಳು ಜಗತ್ತಿನ ಎಲ್ಲ ಭಾಷೆಗಳಲ್ಲಿಯೂ ಅಪಾರ ಸಂಖ್ಯೆಯಲ್ಲಿ ಸಿಗುತ್ತವೆ. ಇಂಥ ಕಥೆಗಳಲ್ಲಿ ಕಿನ್ನರರ ಹಾಜರಿ ಬಹಳ ಮುಖ್ಯವಾದುದ್ದು. ಅವಿಲ್ಲದವು ಕಿನ್ನರ ಕಥೆಗಳಾಗುವುದಿಲ್ಲ. ಈ ದೃಷ್ಟಿಯಿಂದ, ಗ್ರಿಮ್ ಸೋದರ ಸಂಕಲನದಲ್ಲಿರುವ ಎಷ್ಟೋ ಕಥೆಗಳು ಕಿನ್ನರ ಕಥೆಗಳಾಗುವುದಿಲ್ಲ. ಆದರೆ ಸಿಂಡ್ರೆಲಾ, ಸ್ನೋವೈಟ್, ಹನ್ಸೆಲ್ ಮತ್ತು ಗ್ರೆಟಿಲ್ ಕಥೆಗಳು ಕಿನ್ನರ ಕಥೆಗಳ ಸೊಗಸಾದ ಉದಾಹರಣೆಗಳಗುತ್ತವೆ. ಇವುಗಳಲ್ಲಿ ಎರಡನೆಯ ಕಥೆಯಲ್ಲಿ ಕ್ರೂರ ಮಲತಾಯಿ ತನ್ನ ಸವತಿಯ ಮಗಳು ಸ್ನೋವೈಟಳ ಸೌಂದರ್ಯಕ್ಕೆ ಅಸೂಯೆಪಟ್ಟು ಕೊಲ್ಲಿಸುವ ಪ್ರಯತ್ನ ಮಾಡಿದುದು ಮತ್ತು ನಂಬಿಕಸ್ಥ ಸೇವಕನಿಂದ ಸ್ನೋವೈಟ್ ಪಾರಾದುದು ಮೊದಲಾದುದರ ಚಿತ್ರವಿದೆ. ಮುಂದೆ ಅತಿಮಾನುಷದ ಸಹಾಯದಿಂದ ಮಲತಾಯಿ ಕೊಟ್ಟ ಹಿಂಸೆಗಳು ಪರಿಹಾರವಾಗಿ ರಾಜನೊಬ್ಬನನ್ನು ಸ್ನೋವೈಟ್ ಮದುವೆಯಾಗುವುದನ್ನು ಕಾಣುತ್ತೇವೆ. ಕನ್ನಡದಲ್ಲಿ ಇಂಥದೇ ಆಶಯವನ್ನು ಹೊತ್ತ ದೊಡ್ಡ ಹೊನ್ನಿ ಚಿಕ್ಕಹೊನ್ನಿ ಕಥೆಯನ್ನು ನೋಡಬಹುದು. ಹಾಗೆಯೇ ಹನ್ಸೆಲ್ ಮತ್ತು ಗ್ರೆಟಿಲ್ ಕಥೆಯನ್ನು ನಮ್ಮಲ್ಲಿನ ಮಾಟಗಾತಿ (ಕರ್ಣಾಟಕದ ಜಾನಪದ ಕಥೆಗಳು) ಕಥೆ ಹೋಲುತ್ತದೆ. ಅಲ್ಲಿನ ಹನ್ಸೆಲ್, ಗ್ರೆಟಿಲ್ ಇಲ್ಲಿನ ಚೆನ್ನ, ಚೆನ್ನಿಯಾಗಿದ್ದಾರೆ. ಹೀಗೆ ಕುಪಿನರಾಜ, ನಾಗೇಂದ್ರ, ರಾಜಕುಮಾರ-ಮಂತ್ರಿಕುಮಾರ, ಬಿದರೆಯೊಳಗಿನ ಚದುರೆ, ಭಿಕ್ಷುಕರಾಜ- ಇತ್ಯಾದಿ ಅಸಂಖ್ಯ ನಿದರ್ಶನಗಳನ್ನು ನೋಡಬಹುದು. ಕುಪಿನರಾಜ ನಿಜಕ್ಕೂ ಒಂದು ಮಹತ್ತ್ವ ಪೂರ್ಣವಾದ ಕಥೆ. ಸುಮಾರು ಇಪ್ಪತ್ತು ಪುಟಗಳಷ್ಟಿರುವ ಈ ದೀರ್ಘ ಕಥೆ ಹಲವಾರು ಘಟನೆಗಳಿಂದ, ಆಶಯಗಳಿಂದ ಸಂಘಟಿತಗೊಂಡ ಅದ್ಭುತ ರಚನೆಯಾಗಿದೆ. ಒಂದು ಪುಟ್ಟ ಕಾದಂಬರಿಯ ವಸ್ತು ಇದರಲ್ಲಿದೆ ಎಂದರೆ ಆಶ್ಚರ್ಯವಾಗದು.

 ಒಟ್ಟಿನಲ್ಲಿ ಜನಪದದ ಸೃಸ್ಟ್ಯಾತ್ಮಕ ಶಕ್ತಿಯನ್ನೂ ಕಥನ ಸಾಮಥ್ರ್ಯವನ್ನೂ ಪ್ರತಿನಿಧಿಸುವುದಕ್ಕೆ ಕಿನ್ನರ ಕಥೆಗಳು ಸ್ಪಷ್ಟ ಸಾಕ್ಷಿಗಳಾಗುತ್ತವೆ ಎನ್ನಬಹುದು. ಅನಕ್ಷರಸ್ಥರ ಕಲ್ಪನಾ ವೈಭವಕ್ಕೆ ಭೂತಗನ್ನಡಿ ಹಿಡಿಯುವ ಇವು ಅವರು ಬಾಳಿ ಬಿಟ್ಟು ಹೋದ ಬದುಕಿನ ಕಡೆಗೂ ಕ್ಷ-ಕಿರಣಗಳನ್ನು ಬೀರುತ್ತವೆಂದು ಹೇಳಬಹುದಾಗಿದೆ.

 (ನೋಡಿ- ಅಜ್ಜಿಕಥೆ)

 (ನೋಡಿ- ಕಟ್ಟುಕಥೆ)         

    (ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ